

🕉️ನಮೋ ವೇದಪುರುಷಾಯ
ऒं अ॒ग्निमी॓ळॆ पु॒रोहि॑तं य॒ज्ञस्य॑ दॆ॒वमृ॒त्विज॓म् ! हॊता॓रं रत्न॒धात॑मम् !
ಪ್ರತ್ಯಕ್ಷ,ಅನುಮಾನಾದಿ ಪ್ರಮಾಣಗಳಿಂದ ತಿಳಿಯಲು ಸಾಧ್ಯವಿಲ್ಲದ ಧರ್ಮಸ್ವರೂಪವನ್ನು ವೇದವು ತಿಳಿಸುವುದರಿಂದ ವೇದಗಳು ಪರಮಪ್ರಮಾಣಗಳಾಗಿವೆ. ಧರ್ಮಾರ್ಥಕಾಮಮೋಕ್ಷಗಳೆಂಬ ಪುರುಷಾರ್ಥಗಳನ್ನು ತಿಳಿಯಲು ವೇದಗಳೇ ಆಧಾರವಾಗಿವೆ. ವೇದವೆಂದರೆ ಜ್ಞಾನ.
ಅನಾದಿನಿಧನಾ ನಿತ್ಯಾ ವಾಗುತ್ಸೃಷ್ಟಾ ಸ್ವಯಮ್ಭುವಾ !
ಆದೌ ವೆದಮಯೀ ದಿವ್ಯಾ ಯತ:ಸರ್ವಾ:ಪ್ರವೃತ್ತಯ: !!
ಪರಮಾತ್ಮನು ಮೊದಲಿಗೆ ವಾಗ್ರೂಪವಾದ ವೇದಗಳನ್ನು ಸೃಷ್ಟಿಸಿ ಅದರಿಂದ ಸಮಸ್ತ ಜಗತ್ತನ್ನೂ ಸೃಷ್ಟಿಸಿದನು. ಅಂತಹ ವೇದಗಳಿಗಿಂತ ಶ್ರೇಷ್ಠವಾದ ವಿದ್ಯೇಯು ಬೇರೊಂದಿಲ್ಲ.
" ನಾಸ್ತಿ ವೇದಾತ್ ಪರಂ ಶಾಸ್ತ್ರಂ ನಾಸ್ತಿ ಮಾತೃಸಮೋ ಗುರು:" ಎಂಬುದಾಗಿ ಅತ್ರಿ ಮಹರ್ಷಿಗಳು ಅಭಿಪ್ರಾಯಪಟ್ಟಿರುತ್ತಾರೆ.
"ತಸ್ಮಾಚ್ಛಾಸ್ತ್ರಂ ಪ್ರಮಾಣಂ ತೆ ಕಾರ್ಯಾಕಾರ್ಯ ವ್ಯವಸ್ಥಿತೌ" ಇದು ಕಾರ್ಯ - ಇದು ಅಕಾರ್ಯವೆಂದು ವ್ಯವಸ್ಥೆ ಮಾಡುವುದಕ್ಕೆ ವೇದಗಳೇ ಪ್ರಮಾಣವಾದದ್ದೆಂದು ಗೀತಾಚಾರ್ಯನೂ ಉದ್ಘೋಶಿಸಿರುವನು.
"ವಿದ್ಯತೆ ಲಭ್ಯತೇ ಅನೇನ ಇತಿ ವೇದ:"
ಬ್ರಹ್ಮ ಜ್ಞಾನವನ್ನು ಪಡೆಯಲು ಯಾವುದು ಸಹಕರಿಸುತ್ತದೆಯೋ ಅದೇ ವೇದ ಎಂಬುದಾಗಿ ಭಟ್ಟಭಾಸ್ಕರರ ಅಭಿಪ್ರಾಯ.
ವೇದಗಳು ಅಪೌರುಷೇಯವಾದವುಗಳು. "ತಸ್ಮಾದಪೌರುಷೇಯತ್ವಾನ್ನಿತ್ಯತ್ವಾಚ್ಚ ಕೃತ್ಸ್ನಸ್ಯಾಪಿ ವೇದರಾಶೇ:" ಎಂಬುದಾಗಿ ಶ್ರೀಸಾಯಣಾಚಾರ್ಯರು ತಮ್ಮ ಅಥರ್ವವೇದಭಾಷ್ಯ ಉಪೋದ್ಘಾತದಲ್ಲಿ ತಿಳಿಸಿರುತ್ತಾರೆ.
ವೇದಗಳು ಅಧ್ಯಯನ ಸೌಕರ್ಯಕ್ಕಾಗಿ ಸಾವಿರಾರು ಶಾಖೋಪಶಾಖೆಗಳಾಗಿ ವಿಭಜಿಸಲ್ಪಟ್ಟಿವೆ.
"ಅನಂತಾ ವೈ ವೇದಾ:" ಎಂಬುದಾಗಿ ಸಂಪೂಣ೯ವಾಗಿದ್ದ ವೇದರಾಶಿಯನ್ನು ಬ್ರಹ್ಮನಿಂದ ಪ್ರೇರಣೆಪಡೆದಂತಹ ಭಗವಾನ್ ಶ್ರೀವೇದವ್ಯಾಸರು ಋಗ್ವೇದ,ಯಜುರ್ವೇದ,ಸಾಮವೇದ,ಅಥರ್ವವೇದಗಳೆಂದು ವಿಭಜಿಸಿ ಲೋಕಕ್ಕೆ ಪರಮಾನುಗ್ರಹವನ್ನು ಮಾಡಿರುತ್ತಾರೆ.
ಋಗ್ವೆದಪಾಠಕಂ ಪೈಲಂ ಜಗ್ರಾಹ ಸ ಮಹಾಮುನಿ: !
ವೈಶಂಪಾಯನನಾಮಾನಂ ಯಜುರ್ವೆದಸ್ಯ ಚಾಗ್ರಹೀತ್ !
ಜೈಮಿನಿಂ ಸಾಮವೆದಸ್ಯ ತಥೈವಾಥರ್ವವೇದವಿತ್ !
ಸುಮಂತು ಶಿಷ್ಯೊಽಭೂತ್ ವೇದವ್ಯಾಸಸ್ಯ ಧೀಮತ: !
ವೇದವ್ಯಾಸರು ತಮ್ಮ ಶಿಷ್ಯರಾದ ಪೈಲಮಹರ್ಷಿಗೆ ಋಗ್ವೇದವನ್ನು, ವೈಶಂಪಾಯನಮಹರ್ಷಿಗೆ ಯಜುರ್ವೇದವನ್ನು, ಜೈಮಿನಿ ಮಹರ್ಷಿಗೆ ಸಾಮವೇದವನ್ನು, ಸುಮಂತುಮಹರ್ಷಿಗೆ ಅಥರ್ವವೇದವನ್ನು ಕ್ರಮವಾಗಿ ಉಪದೇಶಿಸಿ,
ತಮ್ಮ ಶಿಷ್ಯರ ಮೂಲಕ ಈ ವೈದಿಕವಾಙ್‍ಮಯವನ್ನು ಸಂರಕ್ಷಿಸಿರುತ್ತಾರೆ.
ಸೋಽಯಮೇಕೋ ಯಥಾ ವೇದಸ್ತರುಸ್ತೇನ ಪೃಥಕ್ಕೃತ: !
ಚತುರ್ಧಾ ತು ತತೋ ಜಾತಂ ವೇದಪಾದಪಕಾನನಮ್ !!
ಅಖಂಡವಾಗಿದ್ದ ಒಂದು ವೇದಮಹಾವೃಕ್ಷವನ್ನು ವೇದವ್ಯಾಸರು ಪೃಥಕ್ಕರಿಸಿ ನಾಲ್ಕು ವೇದವೃಕ್ಷಗಳನ್ನು ಮಾಡಿದರು.
ಕ್ರಮೇಣ ವೇದವೃಕ್ಷಗಳ ಒಂದು ಅರಣ್ಯವೇ ಆಯಿತು. ಮೊದಲು ಪೈಲ ಮುನಿಯು ಋಗ್ವೇದವೃಕ್ಷವನ್ನು ಎರಡು ರೀತಿಯಾಗಿ ವಿಂಗಡಿಸಿ ಒಂದು ಸಂಹಿತೆಯನ್ನು ಇಂದ್ರಪ್ರಮಿತಿಗೂ ಮತ್ತೊಂದನ್ನು ಬಾಷ್ಕಲನಿಗೂ ಉಪದೆಶಿಸಿದನು. ಬಾಷ್ಕಲನು ತನ್ನ ಸಂಹಿತೆಯನ್ನು ನಾಲ್ಕುವಿಭಾಗಗಳಾಗಿ ವಿಂಗಡಿಸಿ ಬೋಧ್ಯ,ಅಗ್ನಿಮಾಢಕ, ಯಾಜ್ಞವಲ್ಕ್ಯ ಹಾಗೂ ಪರಾಶರನೆಂಬ ವ್ಯಾಸರ ತಂದೆಯ ಹೆಸರನ್ನೇ ಹೊಂದಿದ ಮತ್ತೋಬ್ಬ ಮುನಿಗೆ ಉಪದೇಶಿಸಿದನು.
ಇಂದ್ರಪ್ರಮಿತಿಯು ತನ್ನ ಶಾಖೆಯನ್ನು ತನ್ನ ಮಗನೂ, ಮಹಾತ್ಮನೂ ಆದ ಮಾಂಡೂಕೇಯನಿಗೆ ಅನುಗ್ರಹಿಸಿದನು. ಆ ಸಂಹಿತಾಶಾಖೆಯು ತನ್ನ ಶಿಷ್ಯಪರಂಪರೆಯಲ್ಲಿ ಕ್ರಮವಾಗಿ ಮುಂದುವರೆಯಿತು.ಇದೇ ಕ್ರಮದಲ್ಲಿ ವೇದಮಿತ್ರನೆಂಬ ಶಾಕಲ್ಯನು ಇಂದ್ರಪ್ರಮಿತಿಯ ಸಂಹಿತೆಯನ್ನು ಅಧ್ಯಯನ ಮಾಡಿದನು.
ಚಕಾರ ಸಂಹಿತಾ: ಪಂಚ ಶಿಷ್ಯೇಭ್ಯ: ಪ್ರದದೌ ಚ ತಾ: !
ತಸ್ಯ ಶಿಷ್ಯಾಸ್ತು ಯೆ ಪಂಚ ತೇಷಾಂ ನಾಮಾನಿ ಮೇ ಶೃಣು !!
ಮುದ್ಗಲೋ ಗೋಮುಖಶ್ಚೈವ ವತ್ಸ್ಯಶ್ಶಾಲೀಯ ಏವ ಚ !
ಶಿಶಿರ:ಪಂಚಮಸ್ಯಾಸೀತ್ ಮೈತ್ರೇಯ ಸುಮಹಾಮತಿ: !!
ಆ ಶಾಕಲ್ಯನು ತಾನು ಅಧ್ಯಯನಮಾಡಿದ ಸಂಹಿತೆಯನ್ನು ಐದುವಿಭಾಗಮಾಡಿ ಐವರು ಶಿಷ್ಯರಿಗೆ ಉಪದೇಶಿಸಿದನು. ಮುದ್ಗಲ,ಗೋಮುಖ, ವಾತ್ಸ್ಯ, ಶಾಲೀಯ ಹಾಗೂ ಮಹಾಪ್ರಾಜ್ಞ್ನನಾದ ಶಿಶಿರ. ಶಾಕಪೂರ್ಣ ಎಂಬ ಶಿಷ್ಯನು ಶಾಕಲ್ಯಸಂಹಿತೆಯನ್ನು ಮೂರು ಸಂಹಿತೆಗಳನ್ನಾಗಿ ವಿಭಾಗಿಸಿ ಅವುಗಳಿಗೆ ಸಂಬಂಧಪಟ್ಟ ನಿರುಕ್ತಗಳನ್ನು ರಚಿಸಿದನು. ಕ್ರೌಂಚ,ವೈತಾಲಿಕ, ಬಲಾಕ, ಎಂಬ ಮೂವರು ನಿರುಕ್ತಕಾರರು. ನಾಲ್ಕನೆಯವನಾದ ವಿರಜನು ವೇದ - ವೇದಾಂಗಪಾರಂಗತನಾಗಿದ್ದನು.
ಇತ್ಯೇತಾ: ಪ್ರತಿಶಾಖಾಭ್ಯೋಹ್ಯನುಶಾಖ ದ್ವಿಜೋತ್ತಮ !
ಬಾಷ್ಕಲಶ್ಚಾಪರಾಸ್ತಿಸ್ರ: ಸಂಹಿತಾ:ಕೃತವಾನ್ ದ್ವಿಜ !!
ಶಿಷ್ಯ:ಕಾಲಾಯನಿರ್ಗಾರ್ಗ್ಯಸ್ತೃತೀಯಶ್ಚ ಕಥಾಜವ: !
ಇತ್ಯೇತೇ ಬಹ್ವೃಚಾ: ಪ್ರೋಕ್ತಾ: ಸಂಹಿತಾ ಯೈ ಪ್ರವರ್ತಿತಾ : !!
ಹೇ ದ್ವಿಜವರ್ಯ ! ಇವೆಲ್ಲವೂ ಪ್ರತಿಶಾಖೆಗಳಿಂದ ಉದಯಿಸಿದ ಅನುಶಾಖೆಗಳು. ಬಾಷ್ಕಲ ಎಂಬ ಮತ್ತೋಬ್ಬ ಮಹರ್ಷಿಯು ಇನ್ನೂ ಶಾಖೆಗಳನ್ನು ರಚಿಸಿದನು. ಅವುಗಳನ್ನು ರಚಿಸಿದವರೆಂದರೆ ಕಾಲಾಯನಿ,ಗಾರ್ಗ್ಯ,ಕಥಾಜವ. ಇವರು ಋಗ್ವೇದದ ಸಂಹಿತೆಗಳನ್ನು ಬಳಕೆಗೆ ತಂದ ಬಹ್ವೃಚರು ಎಂಬುದಾಗಿ ವಿಷ್ಣುಪುರಾಣದಿಂದ ತಿಳಿಯಬಹುದು.
ಋಗ್ವೇದದಲ್ಲಿ ಇಪ್ಪತ್ತೊಂದು ಶಾಖೆಗಳಿದ್ದವೆಂದು ಪ್ರಸಿದ್ಧಿಯಿದೆ. ಋಗ್ವೇದದ ಶಾಕಲಸಂಹಿತೆಯು ಐದು ವಿಭಾಗಗಳಾಗಿ, ಅನಂತರ ಒಂದೊಂದೂ ಮೂರು ಸಂಹಿತೆಗಳಾಗಿ, ಒಟ್ಟು ಹದಿನೈದು ಆಗುತ್ತದೆ. ಬಾಷ್ಕಲ ಸಂಹಿತೆಯಲ್ಲಿ ಆರುಶಾಖೆಗಳಿದ್ದು, ಒಟ್ಟಾರೆಯಾಗಿ ಇಪ್ಪತ್ತೊಂದು ಶಾಖೆಗಳಾಗುತ್ತವೆ. ಇದೇ ರೀತಿ ಉಳಿದ ಯಜುಸ್,ಸಾಮ, ಅಥರ್ವವೇದಗಳ ವಿಷಯವನ್ನೂ ಸಹ ವಿಷ್ಣುಪುರಾಣದಲ್ಲಿ ನೋಡಬಹುದಾಗಿದೆ.
ಉಚ್ಚಾರಣಾನೂಚ್ಚಾರಣ ಕ್ರಮದಲ್ಲಿ ಗುರುಗಳಿಂದ ಉಪದೇಶಿಸಲ್ಪಟ್ಟ ವೇದಗಳನ್ನು ಸ್ವಲ್ಪವೂ ವ್ಯತ್ಯಾಸವಾಗದಂತೆ ಜಾಗರೂಕತೆಯಿಂದ ಶಿಷ್ಯನಾದವನು ಅಧ್ಯಯನಮಾಡಿ,ಮಾಡಿಸುವಂತಹ ಪ್ರಾಚೀನ ಹಾಗೂ ಅತ್ಯಮೂಲ್ಯವಾದ ಶ್ರುತಿಪರಂಪರೆಯನ್ನು ಕಾಲಕಾಲಕ್ಕೆ ಉಳಿಸಿರುವಂತಹದ್ದು ಸನಾತನಧರ್ಮದ ವೈಶಿಷ್ಟ್ಯವೇ ಸರಿ.
© 2025. All rights reserved.
ಶ್ರೀ ಶ್ಯಾಮಸುಂದರ ಶರ್ಮ, ಋಗ್ವೇದ ಸಲಕ್ಷಣ ಘನಪಾಠಿಗಳು
19/1, ಶಂಕರ ರೆಸಿಡೆನ್ಸಿ, 7ನೇ A ಮುಖ್ಯರಸ್ತೆ, ಶ್ರೀನಿಧಿ ಬಡಾವಣೆ
ಜೆ.ಪಿ. ನಗರ, ಬೆಂಗಳೂರು 560062, +91 9845705862 +91 8618945656
